ಆಕ್ಯುಪಂಕ್ಚರ್ - ಸೂಜಿ ಚಿಕಿತ್ಸೆ

  	ದೇಹದ ನಿರ್ದಿಷ್ಟ ಭಾಗಗಳಲ್ಲಿ ಸೂಜಿಗಳನ್ನು ಚುಚ್ಚಿ ನೋವು ಮತ್ತು ರೋಗವನ್ನು ಗುಣಪಡಿಸುವ ಪದ್ಧತಿಯನ್ನು ಆಕ್ಯುಪಂಕ್ಚರ್ ಎನ್ನುತ್ತಾರೆ. ಈ ಪದ್ಧತಿ ಸಿಂಧೂ ಕಣಿವೆಯಲ್ಲಿ ಹುಟ್ಟಿ ಮಧ್ಯ ಏಷ್ಯಾ, ಚೀನಾಗಳಿಗೆ ಹರಡಿತು ಎಂಬ ವಾದವಿದ್ದರೂ ಚೀನಿಯರು ಕಳೆದ ಐದು ಸಾವಿರ ವರ್ಷಗಳಿಂದ ಇದು ತಮ್ಮ ದೇಶದಲ್ಲಿಯೇ ಇದ್ದು ಪ್ರವರ್ಧಮಾನಕ್ಕೆ ಬಂದಿತೆಂದು ನಂಬಿದ್ದಾರೆ. ಸೂಜಿಚಿಕಿತ್ಸೆ ರೋಗಗಳನ್ನು ವಾಸಿ ಮಾಡುವುದಷ್ಟೇ ಅಲ್ಲದೇ ರೋಗಗಳನ್ನು ತಡೆಗಟ್ಟಬಲ್ಲದು ಎನ್ನುತ್ತಾರೆ. 1949ರಲ್ಲಿ ಚೀನಾದ ಮಾವೋ-ತ್ಸೆ-ತುಂಗ್ ಈ ಪುರಾತನ ಶಾಸ್ತ್ರದ ಪುನರುದ್ಧಾರ ಮಾಡಿದರು. ಆಧುನಿಕ ಆಕ್ಯುಪಂಕ್ಚರ್ ಶಾಸ್ತ್ರವನ್ನು ರೂಪಿಸಿದ ಕೀರ್ತಿ ಫ್ರಾನ್ಸ್ ದೇಶಕ್ಕೆ ಸಲ್ಲುತ್ತದೆ. ಇದನ್ನು ಉಪಯೋಗಿಸಿ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಫ್ರಾನ್ಸಿನ ಪರಿಣತರು ಮಾಡಿದ್ದಾರೆ. ರಾಸಾಯನಿಕ ವಸ್ತುಗಳನ್ನು ಅತಿಯಾಗಿ ಬಳಸುವ ಆಧುನಿಕ ವೈದ್ಯಶಾಸ್ತ್ರಕ್ಕೆ ಬದಲಿ ಚಿಕಿತ್ಸಾ ವಿಧಾನಗಳಲ್ಲಿ ಆಕ್ಯುಪಂಕ್ಚರ್ ಒಂದು. ಈ ಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಆಕ್ಯುಪಂಕ್ಚರ್ ಬಿಂದುಗಳಿವೆ. ಇವು ಹನ್ನೆರಡು ಮುಖ್ಯ ಮಾರ್ಗರೇಖೆಗಳ ಮೇಲೆ ಕಂಡುಬರುತ್ತವೆ. ಅನೇಕ ನಿರ್ದಿಷ್ಟ ಬಿಂದುಗಳನ್ನು, ನಿರ್ದಿಷ್ಟ ಬಗೆಯ ಸೂಜಿಗಳಿಂದ ಚುಚ್ಚುವುದೇ ಚಿಕಿತ್ಸಾ ವಿಧಾನ.

  	ಚೀನಿಯರ ನಂಬಿಕೆಯ ಪ್ರಕಾರ ನಮ್ಮ ದೇಹದಲ್ಲಿ ಸಿ.ಎಚ್.ಡಿ ಎಂಬ ಪ್ರಾಣಶಕ್ತಿ ಇದೆ. ಇದು ಆಕ್ಯುಪಂಕ್ಚರ್ ಬಿಂದುಗಳಿರುವ ಮಾರ್ಗದಲ್ಲಿ ಸದಾ ಹರಿಯುತ್ತಿರುತ್ತದೆ. ಈ ಸಿ.ಎಚ್.ಐ ಯಲ್ಲಿ 'ಯಿನ್ ಎಂಬ ಋಣಾತ್ಮಕ ಶಕ್ತಿ ಮತ್ತು 'ಯಾಂಗ್ ಎಂಬ ಧನಾತ್ಮಕ ಶಕ್ತಿಯಿದ್ದು, ಇವು ಪರಸ್ಪರ ವಿರುದ್ಧ ಸ್ವರೂಪ ಹೊಂದಿದ್ದರೂ, ಒಂದು ಇನ್ನೊಂದರ ಜೊತೆಗೆ ಸಹಕರಿಸುತ್ತದೆ. ಈ 'ಯಿನ್ ಮತ್ತು 'ಯಂಗ್‍ಗಳು ಸಮತೋಲನ ಸ್ಥಿತಿಯಲ್ಲಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಇವು ಅಸಮತೋಲನ ಸ್ಥಿತಿಯಲ್ಲಿದ್ದರೆ ರೋಗ ಪೀಡಿತರಾಗುತ್ತೇವೆ. ಆಕ್ಯುಪಂಕ್ಚರ್ ಬಿಂದುಗಳನ್ನು ಸೂಜಿಗಳಿಂದ ಚುಚ್ಚಿದರೆ ಈ ಅಸಮತೋಲನ ಮಾಯವಾಗಿ ರೋಗ ಗುಣವಾಗುತ್ತದೆ. ಈ ವಿಧಾನಗಳಿಂದ ನರರೋಗಗಳು, ಶ್ವಾಸಕೋಶ, ಕೀಲು, ಮೂಳೆಗಳ ರೋಗಗಳು, ಕುಡಿತದ ಚಟ, ನರದೌರ್ಬಲ್ಯ, ನಿದ್ರಾಹೀನತೆ, ಅನಿಯಂತ್ರಿತ ಮೂತ್ರವಿಸರ್ಜನೆ, ಋತುಚಕ್ರದ ಏರುಪೇರು, ತೊನ್ನು, ಮೊಡವೆ, ದೀರ್ಘಕಾಲದ ತೀವ್ರನೋವುಗಳು ಗುಣವಾಗುತ್ತವೆಂದು ಹೇಳುತ್ತಾರೆ.

	ರೋಗದ ಸ್ವರೂಪ, ತೀವ್ರತೆ, ಅವಧಿ, ರೋಗಿಯ ವಿಶಿಷ್ಟತೆಯ ಮೇಲೆ ಎಷ್ಟುಸಲ, ಎಷ್ಟುಕಡೆ, ಎಷ್ಟು ಸೂಜಿಗಳಿಂದ ಚುಚ್ಚುವ ಚಿಕಿತ್ಸೆ ಎಂಬುದನ್ನು ತಜ್ಞರು ನಿರ್ಧರಿಸುತ್ತಾರೆ. ಸಾಮಾನ್ಯವಾಗಿ 8 ರಿಂದ 18 ಸೂಜಿಗಳನ್ನು ಬಳಸಿ, 8 ರಿಂದ 15 ಸಿಟ್ಟಿಂಗ್‍ಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿಬಾರಿಯ ಚಿಕಿತ್ಸೆಗೆ 15 ರಿಂದ 40 ನಿಮಿಷ ಬೇಕಾಗುತ್ತದೆ. ರಕ್ತಸ್ರಾವ, ಪ್ರಜ್ಞೆ ತಪ್ಪುವುದು ಮುಂತಾದವುಗಳು ಈ ಚಿಕಿತ್ಸೆಯಿಂದ ಉಂಟಾಗುವ ಪಾಶ್ರ್ವ ಪರಿಣಾಮಗಳು. 

	ದೀರ್ಘಕಾಲ ಕಾಡುವ ನೋವುಗಳಿಗೆ, ಉದಾಹರಣೆಗೆ ತಲೆನೋವು, ಬೆನ್ನುನೋವು, ಬಿಗಿತಗೊಂಡ ಭುಜದ ಕೀಲು (ಫ್ರೋಜನ್ ಶೋಲ್ಡರ್), ಋತುಸ್ರಾವದ ಏರುಪೇರು ಮುಂತಾದವುಗಳಿಗೆ ಜನರು ಆಕ್ಯುಪಂಕ್ಚರ್ ಚಿಕಿತ್ಸೆಯ ಮೊರೆ ಹೋಗುತ್ತಾರೆ.
										
(ಡಾ. ವಸುಂಧರಾ ಭೂಪತಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ